ಗಂಗಾಂಬಿಕೆ 
ಬಸವಣ್ಣನವರ ಧರ್ಮಪತ್ನಿ, ವಚನಕಾರ್ತಿ, ಅನುಭಾವಿ, ಆದರ್ಶಸತಿ ಎನಿಸಿದ ಈಕೆ ಕಳಚುರಿಯ ಬಿಜ್ಜಳ ಮಹಾಮಂತ್ರಿ ಬಲದೇವನ ಮಗಳು. ರುದ್ರಮುನಿ ಈಕೆಯ ಗುರು. ಮಹಾಮನೆಯ ಮತ್ತು ಅನುಭವ ಮಂಟಪದ ಕಾರ್ಯದಲ್ಲಿ ಬಸವಣ್ಣವನವರಿಗೆ ಈಕೆ ತುಂಬ ನೆರವಾಗಿದ್ದಳು. ಈಕೆಯ ಪಾತಿವ್ರತ್ಯ ಮತ್ತು ದಾಸೋಹ ಭಾವಗಳನ್ನು ಬಸವಪುರಾಣದಲ್ಲಿ ಬಣ್ಣಿಸಲಾಗಿದೆ. 
	ಗಂಗಾಪ್ರಿಯ ಕೂಡಲಸಂಗಮ ಎಂಬುದು ಈಕೆಯ ವಚನಗಳ ಅಂಕಿತ. ಬಸವಣ್ಣನವರು ಏಕನಿಷ್ಠೆಯಿಂದ ನಿರ್ವಹಿಸುತ್ತಿದ್ದ ಕೆಲಸಕಾರ್ಯಗಳನ್ನು ಗಂಗಾಂಬಿಕೆ ತನ್ನ ಒಂದು ವಚನದಲ್ಲಿ ಹೀಗೆ ವರ್ಣಿಸಿದ್ದಾಳೆ.
ಸಾಂದ್ರವಾಗಿ ಹರಗಣ ಭಕ್ತಿಯ ಮಾಳ್ಪನೆಂತೋ !
ಮಾದಲಾಂಬಿಕಾ ನಂದನನು ಸಾಂದ್ರವಾಗಿ ಬಿಜ್ಜಳನರಮನೆಯ 
						ನ್ಯಾಯ ನೋಳ್ಪನೆಂತೋ
ಮಾದರಸನ ಮೋಹದ ಮಗನು ಸಾಂದ್ರವಾಗಿ ಲಿಂಗಾರ್ಚನೆ 
ಲಿಂಗತೃಪ್ತಿ ಅನುಗೈವನೆಂತೋ ಗಂಗಾಪ್ರಿಯ ಕೂಡಲಸಂಗಮ ಶರಣ ಚೆನ್ನ.
ಈಕೆಯ ಸಮಾಧಿ ಬಿಜಾಪುರ ಜಿಲ್ಲೆಯ ಕಪ್ಪಡಿ ಸಂಗಮಕ್ಷೇತ್ರ ಅನತಿದೂರದಲ್ಲಿದೆ.     			(ಬಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ